ಜ್ನ್ಯಾನದ ಪ್ರಶ್ನೆಗಳು

ಸುಷುಮ್ನಾ ಕಣ್ಣನ್
ಸಮಾಜ-ಸಂಸ್ಕೃತಿ ಅಧ್ಯಯನ ಕೇಂದ್ರ (ಸಿ ಎಸ್ ಸಿ ಎಸ್),
ಬೆಂಗಳೂರು.

ಎಸ್. ಎನ್. ಬಾಲಗಂಗಾಧರ ಅವರ ಲೇಖನಕ್ಕೆ ಕಳೆದ ಮಾತುಕತೆ ಸಂಚಿಕೆಯಲ್ಲಿ ಮನು ದೇವದೇವನ್ ಅವರು ಪ್ರತಿಕ್ರಿಯೆ ನೀಡಿದ್ದರು. ಮನು ಅವರ ಪ್ರತಿಕ್ರಿಯೆಯು ಹಲವಾರು ವಿಷಯಗಳನ್ನು ಇನ್ನೂ ಗೊಂದಲಮಯಗೊಳಿಸಿವೆ ಎಂಬುದು ನನ್ನ ಅನಿಸಿಕೆ. ಈ ಕುರಿತು ನಾನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

ಮನು ತಮ್ಮ ಪ್ರತಿಕ್ರಿಯೆಯನ್ನು ಕನಿಷ್ಠ ಎರಡು ರೀತಿಯಲ್ಲಿ ರಚಿಸಿದ್ದಾರೆ: ಮೊದಲನೆಯದಾಗಿ ಪ್ರೊ.ಬಾಲು ಅವರ ಲೇಖನದಲ್ಲಿ ಅವರಿಗೆ ಕಂಡ ಸಮಸ್ಯೆಗಳನ್ನು ಟೀಕಿಸಿದ್ದಾರೆ, ಮತ್ತು ಎರಡದನೆಯದಾಗಿ ಏಕೆ ಪ್ರೊ. ಬಾಲು ಅವರು ಇಂತಹ ವಿಷಯಗಳನ್ನು ಹೇಳಿದ್ದಾರೆ ಎಂಬುದರ ಬಗ್ಗೆ ಊಹೆ ಮಾಡುದ್ದಾರೆ. ಈ ಎರಡನೆಯದನ್ನು ಅವರು ಮಾಡಿರುವ ರೀತಿ ಸ್ವಲ್ಪ ಅಸಭ್ಯವಾಗಿಯೇ ಇದೆ. ಲೇಖಕರ ಮನಸ್ಥಿತಿಯನ್ನು ಊಹಿಸಿವುದು, ಹಾಲುಹಸುಳೆ ಎಂದು ಹೇಳುವುದು, ಗೂಢೋದ್ದೇಶವೇನು ಎಂದು ಕೇಳುವುದು, ಇತ್ಯಾದಿ. ಇವೆಲ್ಲದಕ್ಕೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ಬೌದ್ಧಿಕ ಪ್ರಶ್ನೆಗಳನ್ನು ಮಾತ್ರ ಎತ್ತಿಕೊಳ್ಳುತ್ತೇನೆ.

ಮನು ಹೇಳುತ್ತಾರೆ ಪ್ರೊ. ಬಾಲು ಕೇಳುವ ಚರಿತ್ರೆ ಬೇಕೆ, ಗತಕಾಲ ಬೇಕೆ? ಎಂಬ ಪ್ರಶ್ನೆಯು ಅನೇಕರಿಗೆ ಪ್ರಶ್ನೆಯಾಗಿಯೇ ತೋರುತ್ತಿಲ್ಲ ಎಂದು. ಈ ಅನೇಕರು ಯಾರು ಎಂಬುದನ್ನೂ ಅವರು ಸ್ಪಷ್ಟವಾಗಿ ಹೇಳಿದ್ದರೆ ಚೆನ್ನಾಗಿರುತ್ತಿತ್ತು. ನನಗೆ ತಿಳಿದ ಹಾಗೆ ಚರಿತ್ರೆ ಎಂಬ ಅಧ್ಯಯನ ಕ್ಷೇತ್ರದಲ್ಲಿ ಇತ್ತೀಚಿಗೆ ಹಲವು ಮೂಲಭೂತ ಪ್ರಶ್ನೆಗಳನ್ನು ಎತ್ತಲಾಗಿವೆ. ಉದಾಹರಣೆಗೆ, ಭರತೀಯರು ಏಕೆ ಚರಿತ್ರೆ ಬರೆಯುತ್ತಿರಲ್ಲಿಲ್ಲ? ಬ್ರಿಟಿಷರು ಬರೆದ ಭಾರತೀಯ ಚರಿತ್ರೆಗೂ ಮುನ್ನ ನಮ್ಮಲ್ಲಿ ಚರಿತ್ರೆ ಎಂಬುದನ್ನು ಹೋಲುವ ಬರವಣಿಗೆಗಳು ಇವೆಯೇ, ಇದಲ್ಲಿ ಅವು ಯಾವುವು? ಅವು ಭಾರತದ ಸಂಸ್ಕೃತಿಯಿಂದ ರೂಪುಗೊಂಡಿರಬಹುದೇ, ಅವನ್ನು ನಾವು ಗುರುತಿಸಲು ಆಧರಗಳೇನು, ಇತ್ಯಾದಿ. ಆದ್ದರಿಂದ ಮನು ಅವರು ಈ ಪ್ರಶ್ನೆಯೇ ಸರಿಯಲ್ಲ ಎಂದು ಹೇಳುವುದಾದಲ್ಲಿ ಭಾರತದಲ್ಲಿ ಚರಿತ್ರೆ ಬರೆಯುತ್ತಿರುವ ಮತ್ತು ಅದರ ಸಮಸ್ಯೆಗಳನ್ನು ಅರಿತ ಅನೇಕರಿಗೆ ದೀರ್ಘವಾದ ಉತ್ತರವನ್ನು ಕೊಡಬೇಕಾಗುತ್ತದೆ.

ಪ್ರತ್ಯೇಕವಾಗಿ ಮಾತನಾಡುವುದಾದರೆ, ಎರಡು ಮುಖ್ಯ ಲೇಖನಗಳನ್ನು ಮನು ಅವರು ಗಮನಿಸಬೇಕಾಗುತ್ತದೆ. ಒಂದು, ಆಶೀಶ್ ನಂದಿ ಅವರ "ಹಿಸ್ಟರಿ’ಸ್ ಫ಼ರ್ಗಾಟ್ಟನ್ ಡಬಲ್ಸ್" ಮತ್ತು ಇನ್ನೊಂದು ದೀಪೇಶ್ ಚಕ್ರಬರ್ತಿ ಅವರ "ಚರಿತ್ರೆ ಎಂಬ ಟೀಕೆ, ಚರಿತ್ರೆಯ ಟೀಕೆಗಳು" ಎಂಬ ಲೇಖನವು. ಈ ಲೇಖನದಲ್ಲಿ ನಂದಿ ಅವರು ಚರಿತ್ರೆಯು ಗತಕಾಲವನ್ನು ರಚಿಸುವ ಒಂದು ಪ್ರಧಾನ ವಿಧಾನವಾಗಿದೆಯೇ ಹೊರೆತು, ಸರ್ವಾತ್ರಿಕ ಮತ್ತು ಏಕಮಾತ್ರ ವಿಧಾನವಂತೂ ಖಂಡಿತವಾಗಿಯೂ ಅಲ್ಲ ಎಂದು ವಾದಿಸಿದ್ದಾರೆ. ಚರಿತ್ರೆಯೇ ಪ್ರಧಾನ ಎಂದು ಭಾವಿಸುವುದು ಆಧುನಿಕ ರಾಷ್ಟ್ರ-ರಾಜಕೀಯ, ಬೇಕನ್ ನ ಸೈಂಟಿಫ಼ಿಕ್ ರಾಶನಾಲಿಟಿ ಮತ್ತಿತರ ಕಲ್ಪನೆಗಳನ್ನು ಆಧರಿಸಿದ್ದು ಎಂದೂ ಹೇಳುತ್ತಾರೆ. ಆಧುನಿಕವಲ್ಲದ ಪ್ರತಿಯೊಂದು ಸಂಸ್ಕೃತಿಗೂ ಚಾರಿತ್ರಿಕ ಪ್ರಜ್ನ್ಯೆಯನ್ನು ತರಲಾದಾಗ ಆಗುವ ಆಘಾತಗಳನ್ನು ಈ ಲೇಖನವು ತೋರಿಸುತ್ತದೆ. ದೀಪೇಶ್ ಚಕ್ರಬರ್ತಿ ಅವರು ಕೂಡ ತಮ್ಮ ಲೇಖನದಲ್ಲಿ "ಕಳೆದ ಕೆಲವೇ ವರ್ಷಗಳ ಹಿಂದೆ ಚರಿತ್ರೆಯೇ ಇಲ್ಲದ ಸಂಸ್ಕೃತಿಗಳು ಯಾಕೆ ಇಂದು ಚರಿತ್ರೆಯನ್ನು ಹೊರತಿರಲು ಸಾಧ್ಯವೇ ಇಲ್ಲವೆಂಬಂತೆ ಆಡ ತೊಡಗಿವೆ" ಎಂದು ಕೇಳುತ್ತಾರೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವಂತಹ ವಿಶ್ಲೇಶಣೆಯನ್ನು ಪ್ರೊ. ಬಾಲು ಅವರು ತಮ್ಮ ಲೇಖನದಲ್ಲಿ ನೀಡಿದ್ದಾರೆ. ಅವರು ಯುರೋಪಿನ ಕ್ರಿಸ್ಚಿಯನಿಟಿ ಮತ್ತು ಅದಕ್ಕೆ ಸಂಬಂಧ ಪಟ್ಟ ಕೆಲವು ಮುಖ್ಯ ತಿರುವುಗಳು, ಇಂದು ನಾವು ಚರಿತ್ರೆ ಬರೆಯುವಾಗ ‘ಸತ್ಯ’ದ ಬಗ್ಗೆ ಕೇಳುವ ಪ್ರಶ್ನೆಗಳನ್ನು ಕೇಳುವಂತೆ ಮಾಡಿವೆ, ಎಂದು ಹೇಳುತ್ತಾರೆ. ಈ ವಿಷ್ಲೇಶಣೆಯು ನಂದಿ ಅವರ ಲೇಖನದಲ್ಲಿ ದೊರೆಯುವುದಲ್ಲಿ, ಮತ್ತು ನಿಜವಾಗಿಯೂ ಹೊಸದಾದಂತಹದು. ಆದ್ದರಿಂದ ಮನು ಗತಕಾಲಕ್ಕೂ ಚರಿತ್ರೆಗೂ ಬರೀ ವಿನ್ಯಾಸದ ವ್ಯತ್ಯಾಸ ಎಂದು ಹೇಳುವುದಾದಲ್ಲಿ, ಗತಕಾಲವನ್ನು ಯಾವುದೇ ವಿನ್ಯಾಸಕ್ಕೆ ತರದೇ ಇರಿಸಿಕೊಳ್ಳುವ ಸಂಸ್ಕೃತಿಗಳ ಇರುವುಕೆಯನ್ನು ಅವರು ಒಪ್ಪಿಕೊಳ್ಳುತ್ತಾರೆಯೇ ಅಥವಾ ಹೇಗೆ ಉಲ್ಲೇಖಿಸುತ್ತಾರೆ ಎಂಬುದು ನಾನು ಕೇಳುವ ಪ್ರಶ್ನೆ. ಅಲ್ಲದೇ ಒಂದು ಕಾಲದ ಬಗ್ಗೆ ಭಿನ್ನ ವಿವರಣೆಗಳನ್ನು ಚರಿತ್ರಕಾರರು ಕೊಟ್ಟಿರುವ ಸಂದರ್ಭದಲ್ಲಿ ಹುಟ್ಟುವ ಅನೇಕ ಪ್ರಶ್ನೆಗಳನ್ನು ಮನು ಹೇಗೆ ಎದುರಿಸುತ್ತಾರೆ ಎಂಬುದರ ಬಗ್ಗೆಯೂ ನನಗೆ ಕುತೂಹಲ ಹುಟ್ಟಿದೆ.

ಸೋಕ್ರ್‍ಆಟಿಸ್ ನಿಂದ ಸಮಕಾಲೀನ ಸಮಯದವರೆಗೆ ಮನು ಅನೇಕ ಚಿಂತಕರನ್ನು ಮತ್ತು ಚಾರಿತ್ರಿಕ ಘಟ್ಟಗಳನ್ನು ಎತ್ತಿ ತೋರಿಸಿ ಪ್ರೊ. ಬಾಲು ಅವರು "ಎನ್ಲೈಟನ್ಮೆಂಟನ್ನು ಜರಿಯುತ್ತಿದ್ದರೂ ಅದರ ಮನೋಧರ್ಮದಿಂದ ಮುಕ್ತರಾಗಿಲ್ಲ" ಎಂದು ಹೇಳಿದ್ದಾರೆ. ಆದರೆ, ಅವರು ತಮ್ಮ ವಾದಕ್ಕೆ ಬಳಸುವ ಚಿಂತಕರು ಅಥವಾ ಚಿಂತನೆಗಳಾವುವೂ ಭಾರತದಿಂದ ಹೊರಬಂದವಲ್ಲ. ಈ ಚಿಂತನೆಗಳೇ ಅವರಿಗೆ ಭಾರತದಲ್ಲಿ ದೊರಕಲ್ಲಿಲ್ಲವಾದರೆ ಅದು ಏಕೆ ಎಂಬ ಪ್ರಶ್ನೆ ಹುಟ್ಟುತ್ತದೆ. ಸರಳವಾಗಿ ಹೇಳುವುದಾದಾದರೆ ಭಾರತದ ಗತಕಲದಲ್ಲಿ ಶಾನ್ ಬೋದಾ ಅಥವಾ ಹಾಬ್ಸ್ ಇರಲ್ಲಿಲ್ಲ. ಮತ್ತು ಭಾರತ ಆ ರೀತಿಯ ಚಿಂತನೆಯನ್ನಾಗಲಿ, ಆ ರೀತಿಯ ಚಿಂತಕರನ್ನಾಗಲಿ ಸೃಷ್ಟಿಸಲಿಲ್ಲ. ಹೀಗಿರುವಾಗ ನಮ್ಮ ಗತಕಾಲದ ಬಗ್ಗೆ ಪ್ರೊ.ಬಾಲು ಕೇಳುತ್ತಿರುವ ಪ್ರಶ್ನೆಗಳು ಹಾಗೂ ನೀಡುತ್ತಿರುವ ಉತ್ತರಗಳು ಅತಿ ಸೂಕ್ತ ಎಂದು ನನಗನಿಸುತ್ತದೆ. ಪ್ರೊ.ಬಾಲು ಚಾರಿತ್ರಿಕ ಪ್ರಙ್ನ್ಯೆಗೆ ದೊರೆತಿರುವ ಹಲಾವಾರು ರೀತಿಯ ಪ್ರತಿಕ್ರಿಯೆಗಳನ್ನು ತಮ್ಮ ಲೇಖನದಲ್ಲಿ ವಿವರಿಸುತ್ತಾರೆ, ಅಲ್ಲದೆ ಭಾರತದಲ್ಲಿ ನಡೆದ ಚಿಂತನೆಗಳ ಬಗ್ಗೆಯೂ ತಮ್ಮ ವಾದವನ್ನು ಮಂಡಿಸುತ್ತಾರೆ. ಈ ವಾದಗಳು ಏಕೆ ಸಾಲದು ಎಂದು ಮನು ಅವರು ವಾದಿಸಬೇಕಾದರೆ ಭಾರತದಲ್ಲಿ ಯಾವ ರೀತಿಯ ಚಿಂತನೆ ಇದ್ದಿತ್ತೆಂಬುದನ್ನು ಅವರು ನಮಗೆ ಹೇಳಬೇಕಾಗುತ್ತದೆ. ಅದು ಬಿಟ್ಟು ಊಟ-ಬಟ್ಟೆಯ ಸಮಸ್ಯೆಯನ್ನು ಏಕೆ ಪ್ರೊ. ಬಾಲು ತೆಗೆದುಕೊಂಡಿಲ್ಲ ಎಂದು ಕೇಳವುದು ಅಪ್ರಸ್ತುತ.

ಏಕೆ ನಾವು ಯುರೊಪೆಯನ್ ಚಿಂತಕರನ್ನು ಬಳಸಿಕೊಂಡು ಭಾರತವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದೇವೆ, ಎಂದು ದೀಪೇಶ್ ಚಕ್ರಬರ್ತಿ ತಮ್ಮ "ಪೋಸ್ಟ್ಕಲೊನಿಯಲಿಟಿ ಅನ್ಡ್ ದ ಆರ್ಟಿಫ಼ಿಸ್ ಆಫ಼್ ಹಿಸ್ಟರಿ" ಎಂಬ ಇನ್ನೊಂದು ಲೇಖನದಲ್ಲಿ ಕೇಳುತ್ತಾರೆ. ಇಲ್ಲಿ ಅವರು ಹೆಗೆಲ್ ಭಾರತಕ್ಕೆ ಬಂದೇ ಇರಲ್ಲಿಲ್ಲ ಆದರೂ ಅವನ ಚಿಂತನೆಯನ್ನು ಆಧರಿಸಿ ನಾವು ಏಕೆ ಭಾರತದ ಇಂದಿನ ಆಗುಹೋಗುಗಳನ್ನು ವಿವರಿಸುತ್ತೇವೆ ಎಂದು ಕೇಳುತ್ತಾರೆ. ಹೆಗೆಲ್ ಭಗವದ್ಗೀತೆಯ ಬಗ್ಗೆ ಬರೆದ ವಿಷಯಗಳನ್ನು ನೋಡಿದರಂತೂ ಅವನು ಓರಿಯಂಟಲಿಸಮ್ ನ ಧಾಟಿಯ ಚಿಂತಕ ಎಂದು ಸ್ಪಷ್ಟವಾಗುತ್ತದೆ. ಆದ್ದರಿಂದ ಮನು ಅವರು ಹಾಬ್ಸ್ ಮತ್ತಿತರರು ಭಾರತದ ಬಗ್ಗೆ ಮಾತಡುತ್ತಿದ್ದರು ಎಂಬಂತೆ ವರ್ತಿಸಿದರೆ, ಅದು ಪ್ರಶ್ನಾರ್ಹ. ಅಲ್ಲದೇ ಮನು ಅವರ ಸೋಕ್ರ್‍ಆಟಿಸ್ ನಿಂದ ಹಾಬ್ಸ್ ವರೆಗಿನ ಉದಾಹರಣೆಗಳು ಭಾರತದ ಗತಕಾಲದಿಂದ ಬಾರದಿರುವುದರಿಂದ, ಭಾರತದ ಗತಕಾಲದಲ್ಲಿ ಎನು ಸಂಘಟಿಸಿರಬಹುದು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ಭಾಷೆ ಮತ್ತು ‘ಸತ್ಯ’, ಹಾಗೂ ನಮ್ಮ ಗತಕಾಲದಲ್ಲಿರುವ ಕಥೆಗಳ ಬಗ್ಗೆ ಪ್ರೊ.ಬಾಲು ನೀಡಿರುವ ವಿವರಣೆಯು, ಎನ್ಲೈಟನ್ಮೆನ್ಟ್ ನ ಬಳುವಳಿಯಾದ ಅನೇಕ ಪರಿಕಲ್ಪನೆಗಳು ಯಾವ ಚರಿತ್ರೆಯ ಭಾಗವಾಗಿ ಇವೆ ಎಂದು ತಿಳಿಸಿ, ಹಲವಾರು ವಿಷಯಗಳನ್ನು ಸ್ಪಶ್ಟಪಡಿಸುತ್ತದೆ ಎಂದು ನನಗನ್ನಿಸುತ್ತದೆ. ಮನು ಅವರು ಅಲ್ಲಲ್ಲಿ ಕೊಡುವ ಕೆಲವು ಉದಾಹರಣೆಗಳನ್ನು ನೋಡಿದರೆ, ಅವರು ಪ್ರೊ.ಬಾಲು ಅವರ ಇತರ ಒಂದೆರಡು ಲೇಖನಗಳನ್ನೂ ಓದಿರುವಂತೆ ಕಾಣುತ್ತದೆ. ಆದರೆ ಜ್ನ್ಯಾನ ಎಂದರೆ ಅರಿವು ಎಂಬ ತಮ್ಮ ಅಭಿಪ್ರಾಯವನ್ನು ಹೇಳುತ್ತಾ ಮನು ಪ್ರೊ. ಬಾಲು ಅವರ ಸಂಶೋಧನೆಯ ಬಗ್ಗೆ ತಪ್ಪು ಕಲ್ಪನೆಗಳನ್ನಿಟ್ಟುಕೊಂಡಿರುವುದು ಕಂಡುಬರುತ್ತದೆ. ಪ್ರೊ.ಬಾಲು ಅವರ ಲೇಖನಗಳನ್ನು ಒದಿದಾಗ ಸ್ಪಷ್ಟವಾಗುವುದೇನೆಂದರೆ, ಅವರ ಪ್ರಶ್ನೆಗಳು ಮತ್ತು ತತ್ವಗಳು, ಜ್ನಾನದ ಬಗ್ಗೆ ಯಾವುದೋ ಪೂರ್ವಸಿದ್ಧ ತತ್ವದಿಂದ ಹೊರಟಿದೆ ಮತ್ತು ನಾವು ಅದನ್ನು ತಿಳಿಯಬೇಕು ಎಂದು ಭಾವಿಸುವ ಅಗತ್ಯವಿಲ್ಲ ಎಂದು. ಬದಲಾಗಿ ಅವರು ಕೇಳುವ ಪ್ರಶ್ನೆಗಳು, ಅವುಗಳಿಗೆ ಉತ್ತರ ಸಿಗದಂದತಹ ವಿಷಯ, ಉತ್ತರ ಸಿಗಲಾಗದಂತಹ ಸಂದರ್ಭ, ಇವೆಲ್ಲವನ್ನೂ ಗಮನಿಸಿದರೆ ಸಾಕು. ಉತ್ತರಗಳಿಲ್ಲದ ಸಂದರ್ಭಗಳ ಕುರಿತು ಸಂಶೋಧನೆ ನಡೆಸಿ ಆನಂತರ ಪ್ರೊ. ಬಾಲು ಅವರು ಜ್ನ್ಯಾನದ ಬಗ್ಗೆ ಒಂದಷ್ಟು ವಿಷಯಗಳನ್ನು ನಮಗೆ ಹೇಳುತ್ತಾರೆ. ಆದರೆ ಮನು ಅವರ ಪ್ರತಿಕ್ರಿಯೆಯಲ್ಲಿ ಈ ಎಲ್ಲದರ ಮೊದಲು-ಕೊನೆಗಳೆಲ್ಲವೂ ಗೊಂದಲಮಯಗೊಂಡಿವೆ. ಯಾವುದು ಪ್ರೊ.ಬಾಲು ಅವರ ನಿರ್ಣಯ, ಯಾವುದು ಅವರ ವಾದದ ಸರಣಿ ಎಂಬುದನ್ನು ಸರಿಯಾಗಿ ಅರಿಯಾದೇ ‘ರೆಫ಼ರೆನ್ಸ್’ ಇತ್ಯಾದಿ ತಾತ್ವಿಕ ಸಮಸ್ಯೆಗಳ ಬಗ್ಗೆ ಮನು ಅವರು ಅವಸರದ ಮಾತುಗಳನ್ನಾಡಿದ್ದಾರೆ. ಪ್ರೊ. ಬಾಲು ಅವರು ಎತ್ತುತ್ತಿರುವ ಪ್ರಶ್ನೆಗಳು ಜ್ನ್ಯಾನದ ಬಗ್ಗೆ ಯಾವುದೇ ಕಲ್ಪನೆಗಳನ್ನು ಹೊಂದಿದ್ದವರೂ ಗಮನಿಸಬೇಕಾದಂತಹವು ಎಂದು ನನಗನಿಸುತ್ತದೆ.

You just read my first published piece in Kannada :). Was a response to Manu Devadevan's "Jana Marulo, Jaatre Marulo" in Matukate, which was a response to Balu's essay on history.

Comments

Popular posts from this blog

A man called P

Indian Women and the Pressure to look young

Talk at Women's Studies Dept., BU